ಚಬ್ ಮೀನು-
ಸಿಪ್ರಿನಿಫಾರ್ಮಿಸ್ ಗಣದ ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಅನೇಕ ಜಾತಿಯ ಮೀನುಗಳಿಗಿರುವ ಸಾಮಾನು ಹೆಸರು. ಇವು ಸಹಿ ನೀರು ಮೀನುಗಳು; ಸಣ್ಣಪುಟ್ಟ ನದಿಗಳಲ್ಲಿಯೂ ಝರಿಗಳಲ್ಲಿಯೂ ವಾಸಿಸುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯಭಾಗ, ಯೂರೋಪ್ ಮುಂತಾದೆಡೆಗಳಲ್ಲಿ ಇವುಗಳ ವ್ಯಾಪ್ತಿ ಉಂಟು. 

ತೆಳು ಶರೀರ, ಮೋಟು ತಲೆ, ಗಟ್ಟಿಯಾದ ದವಡೆಗಳು, ಗಂಟಲ ಹಲ್ಲುಗಳು (ಫ್ಯಾರಿಂಜಿಯಲ್ ಟೀತ್), ದವಡೆಯ ಹಿಂಭಾಗದಲ್ಲಿ ತೆಳುವಾದ ಸ್ಪರ್ಶ ರೋಮಗಳು (ಬಾರ್ಬಲ್ಸ್), ಮುಳ್ಳುಗಳಿಲ್ಲದ ಈಜುರೆಕ್ಕೆ, ಉದ್ದವಾದ ಮತ್ತು ಚೋಪಾಗಿ ಕಾಣುವ ಎದೆಯ ಈಜುರೆಕ್ಕೆ. ಕವಲೊಡೆದ ಬಾಲದ ಈಜುರೆಕ್ಕೆ, ಮೈತುಂಬ ಹುರುಪೆಗಳು, - ಇವು ಈ ಮೀನುಗಳ ಪ್ರಮುಖ ಲಕ್ಷಣಗಳು. ಇವು ನಮ್ಮ ದೇಶದ ಗೆಂಡೆ ಮೀನುಗಳನ್ನು ಹೋಲುತ್ತವೆ. ಸುಮಾರು 4 ರಿಂದ 12 ಇಂಚು ಬೆಳೆಯುತ್ತವೆ.
ಕೀಟ ಡಿಂಬಗಳು, ಸಣ್ಣಗಾತ್ರದ ಇತರೆ ಮೀನುಗಳು, ಮತ್ತು ಹಲವು ಬಗೆಯ ಜಲಸಸ್ಯಗಳು ಈ ಮೀನುಗಳ ಆಹಾರ. ಕೆಲವೊಮ್ಮೆ ತಮ್ಮ ಮರಿಗಳನ್ನೇ ತಿನ್ನುವುದುಂಟು. ಸಂತಾನೋತ್ಪತ್ತಿಯ ಕಾಲದಲ್ಲಿ ಹೆಣ್ಣು ಮೀನುಗಳ ಪಾಶ್ರ್ವ ಮತ್ತು ಉದರ ಭಾಗ ಕೆಂಪುಬಣ್ಣಕ್ಕೆ ತಿರುಗುತ್ತದೆ. ಸರೋವರ ಇಲ್ಲವೆ, ಕೊಳದ ಅಂಚಿನಲ್ಲಿ, ಅಥವಾ ನದಿಗಳ ನಿಂತ ನೀರಿನ ಮಡುಗಳಲ್ಲಿ ತಳಭಾಗದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನಿಟ್ಟು ಅದರ ಮೇಲೆ ಮೊಟ್ಟೆಗಳನ್ನಿಡುವುದು ಇದರ ಕ್ರಮ. ಸಾಮಾನ್ಯವಾಗಿ ವಸಂತ ಋತು ಈ ಮೀನುಗಳ ಸಂತಾನೋತ್ಪತ್ತಿಯ ಕಾಲ.

ಚಬ್ ಮೀನುಗಳಲ್ಲಿ ಅನೇಕ ಪ್ರಭೇದಗಳಿವೆ. ಸೆಮಾಟಲಸ್ ಅಟ್ರೊಮ್ಯಾಕ್ಯಲೇಟಸ್, ಸೆ. ಕಾರ್ಪೊರಾಲಿಸ್, ಜಾತಿಯ ಮೀನುಗಳು ಸಾಮಾನ್ಯವಾಗಿ ಬೆಟ್ಟದ ಝರಿಯ ಚಬ್ (ಫಾಲ್ ಫಿಶ್) ಎಂದು ಕರೆಯಲಾಗುತ್ತದೆ. ಸಣ್ಣ ನದಿಗಳಲ್ಲಿ, ಕಲ್ಲುಗಳಿಂದ ಕೂಡಿದ ತಳವಿರುವ ಮಡುಗಳಲ್ಲಿ, ಇವು ವಾಸಿಸುತ್ತವೆ. ಇದು ಒಂದು ಒಳ್ಳೆಯ ಬೇಟೆ ಮೀನು (ಗೇಮ್ ಫಿಶ್). ಟ್ರೌಟ್ ಮೀನಿನ ಅಭಾವದಲ್ಲಿ ಇವುಗಳನ್ನು ಬೇಟೆಯಾಡುವುದುಂಟು. ವಸಂತದಲ್ಲಿ ಇವುಗಳ ತಲೆಯಮೇಲೆ ಗಂತಿಗಳು ಬೆಲೆಯುತ್ತವೆ. ನಿಶೇಚಿತ ಅಂಡಗಳ ಸುತ್ತ ಗಂಡು ಮೀನು ಜಲ್ಲಿಯಿಂದ ಗೂಡನ್ನು ನಿರ್ಮಿಸುತ್ತವೆ.

ಬರ್ಮಡ ಚಬ್ ಮೀನು ಸ್ವಚ್ಛವಾದ ಝರಿಗಳಲ್ಲಿ ಕಾಣಸಿಗುವ ಮೀನುಗಳು. ಹೆರಿಂಗ್ ಮೀನುಗಳ ಗುಂಪಿನಲ್ಲಿ ಸಾಮಾನ್ಯವಾಗಿ ಸುತ್ತಾಡುತ್ತಿದ್ದರೂ ಅವುಗಳನ್ನು ಬೇಟೆಯಾಡುವುದಿಲ್ಲ. ಸುಮ್ಮನೆ ಕುತೂಹಲದಿಂದ ಹೆರಿಂಗ್ ಮೀನುಗಳನ್ನು ಹಿಂಬಾಲಿಸುತ್ತವೆ.
ಸಾಕ್ರೊಮೆಂಟಾ ಚಬ್ (ದಪ್ಪವಾದ ಚಬ್), ಇದು ಕ್ಯಾಲಿಫೋರ್ನಿಯಾ ಕಣಿವೆಯ ನದಿಗಳಲ್ಲಿ ಧಾರಾಳವಾಗಿ ಸಿಗುತ್ತವೆ. ಫೆಸಿಫಿಕ್ ಡ್ರೈನೇಜ್‍ನಲ್ಲಿ ಕಂಡುಬರುವ ಮಿನ್ನೊ ಕುಟುಂಬದ ಕೆಲವೇ ಮೀನುಗಳಲ್ಲಿ ಇದೂ ಒಂದು. ಇದರ ಹುರುಪೆಗಳ ಮೇಲೆ ಗಾಢ ಬಣ್ಣದ ಮಚ್ಚಗಳಿವೆ. ಇದರ ಉದ್ದ ಸುಮಾರು 12 ಇಂಚು. ಬಣ್ಣ ಮಬ್ಬು ಕಂದು.

ಕೊಲಂಬಿಯಾದ ಮೈಲೊಕಿಲಸ್ ಕಾರಿನಸ್, ಯೂರೋಪ್‍ನ ಲ್ಯೂಯಿಸ್ಕಸ್ ಸಿಫಾಲಸ್, ಉತ್ತರ ಅಮೆರಿಕದ ಹೈಬಾಪ್ಸಿಸ್, ಗಿಲ್ ಮತ್ತು ಪಿಫ್‍ಟೆಲಿಸ್, ಅಮೆರಿಕ ಸಂಯುಕ್ತ ಸಂಸ್ಥಾನದ ನಾಕೊಮಿಸ್ ಇವು ಪ್ರಮುಖ ಬಗೆಯ ಚಬ್ ಮೀನುಗಳು.
ಎಲ್ಲ ಚಬ್ ಮೀನುಗಳೂ ಒಳ್ಳೆಯ ಎರೆ ಪ್ರಾಣಿಗಳಾಗಿ ಉಪಯುಕ್ತವೆನಿಸಿವೆ. ದೊಡ್ಡಗಾತ್ರಕ್ಕೆ ಬೆಳೆಯುವ ಚಬ್ ಗಳನ್ನು ವಿನೋದಕ್ಕಾಗಿ ಅಥವಾ ಆಹಾರಕ್ಕಾಗಿ ಬೇಟೆಯಾಡುತ್ತಾರೆ.

 (ಎ.ಎಸ್.ಎಚ್.; ಟಿ.ಎಸ್.ವಿಶ್ವನಾಥ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ